ತಿರುನೀಲಕಂಠ ರಗಳೆ  :- 
	 ತಮಿಳುನಾಡಿನಲ್ಲಿ ಹುಟ್ಟಿ ಶೈವಧರ್ಮದ ಪುನರುತ್ಥಾನಕ್ಕೆ ಕಾರಣರಾದ ಅರವತ್ತುಮೂರು ಪುರಾತನರಲ್ಲಿ ಮೊದಲಿಗ. ಈತ ಚಿದಂಬರ ಕ್ಷೇತ್ರದವನಾಗಿದ್ದು ವೃತ್ತಿಯಲ್ಲಿ ಕುಂಬಾರನಾಗಿದ್ದ. ಕಾಲ ಕ್ರಿ. ಶ. 600ರಿಂದ 660 ಇರಬಹುದೆಂದು ಅಭಿಪ್ರಾಯಪಡಲಾಗಿದೆ. ಕನ್ನಡದಲ್ಲಿ ಈ ಪುರಾತನರ ಚರಿತ್ರೆಯನ್ನು ಬಿತ್ತರಿಸಿದವರಲ್ಲಿ ಹರಿಹರ ಮೊದಲಿಗ. ಈತನ ತರುವಾಯ ಹುಟ್ಟಿಕೊಂಡ ವೀರಶೈವ ಕಾವ್ಯಗಳಲ್ಲಿ ಈ ಪುರಾತನರ ಚರಿತ್ರೆ ಪುನರಾವರ್ತಿತವಾಗಿದೆ. ಹರಿಹರ ಚಿತ್ರಿಸಿರುವ ಈತನ ಕಥೆ ಹೀಗಿದೆ : ಚೋಳದೇಶದ ಪೊನ್ನಾಂಬಲ ಎಂಬ ಊರಲ್ಲಿ ತಿರುನೀಲಕಂಠ ಹಾಗೂ ಮುತ್ತೈದೆ ಎಂಬ ಶೈವದಂಪತಿಗಳಿದ್ದರು. ಈ ತರುಣ ದಂಪತಿಗಳ ನಡೆನುಡಿ ಆಚಾರವಿಚಾರಗಳು ಶಿವನಿಗೂ ಶಿವಭಕ್ತರಿಗೂ ಮೆಚ್ಚುಗೆಯಾಗಿದ್ದವು. ತಿರುನೀಲಕಂಠ ಪ್ರತಿನಿತ್ಯ ಪೊನ್ನಾಂಬಲಂನ ದೇವಾಲಯಕ್ಕೆ ಹೋಗಿ ನಡುರಾತ್ರಿಯವರೆಗೂ ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದುದು ಪದ್ಧತಿಯಾಗಿತ್ತು. 

	ಒಂದು ದಿನ ರಾತ್ರಿ ತಿರುನೀಲಕಂಠ ಪೂಜೆ ಮುಗಿಸಿಕೊಂಡು ಎಂದಿನಂತೆ ಮನೆಗೆ ಹಿಂತಿರುಗುತ್ತಿದ್ದ . ದಾರಿಯುದ್ದಕ್ಕೂ ಶಿವನಾಮಸಂಕೀರ್ತನೆಯಲ್ಲಿ ತಲ್ಲೀನನಾಗಿದ್ದ. ಹೀಗಿರುವಲ್ಲಿ ಒಬ್ಬ ವಿಲಾಸಿನಿ ಅರಿಯದೆ ಈ ಭಕ್ತನ ಮೇಲೆ ತಳಿಗೆಯ ನೀರನ್ನು ಚೆಲ್ಲಿ ಹಾಗೆ ಮಾಡಿದುದಕ್ಕಾಗಿ ನೊಂದು ನೀಲಕಂಠನ ಪಾದಗಳ ಮೇಲೆ ಬಿದ್ದು ಆತನನ್ನು ತನ್ನ ಮನೆಗೆ ಕರೆತಂದು ಸುಗಂಧಪರಿಮಳೋದಕದಿಂದ ಮೀಯಿಸಿ ನೂತನ ವಸ್ತ್ರಗಳನ್ನು ಉಡಿಸಿ ದಿವ್ಯಗಂಧಾನುಲೇಪನಗಳನ್ನು ಪೂಸಿ ಮನೆಗೆ ಕಳಿಸಿಕೊಟ್ಟಳು. ಮಿಂಚಿನಂತೆ ನಡೆದುಹೋದ ಈ ಘಟನೆಗಳ ಪರಿವೆಯೇ ಇಲ್ಲದ ತಿರುನೀಲಕಂಠ ನೇರವಾಗಿ ಮನೆಗೆ ಹಿಂತಿರುಗಿದ. 

	ಇದು ಯಾವುದನ್ನೂ ತಿಳಿಯದೆ ಇದನ್ನೆಲ್ಲ ತಪ್ಪಾಗಿ ಅರ್ಥಮಾಡಿಕೊಂಡ ಈತನ ಸತಿ ಮುತ್ತೈದೆ ತನ್ನನ್ನು ಮುಟ್ಟಿದರೆ ಶಿವನಾಣೆ ಎಂದುಬಿಟ್ಟಳು. ತನ್ನ ಹೆಂಡತಿ ಮಾಡಿದ ಪ್ರಮಾದಕ್ಕಾಗಿ ವ್ಯಸನಗೊಂಡ ಈ ಭಕ್ತ ಆಕೆ ಇಟ್ಟ ಆಣೆಯನ್ನು ನಡೆಸುವುದಕ್ಕೆ ಸಿದ್ಧನಾದ. ಅಂದಿನಿಂದ ಅವರಿಬ್ಬರೂ ದೈಹಿಕವಾಗಿ ಬೇರೆಯಾದರು. ಹೀಗೇ ಅವರು ವೃದ್ಧರೂ ಆದರು.

	ಹೀಗಿರಲು ಶಿವ ಅವರನ್ನು ಕೂಡಿಸಬೇಕೆಂದು ಮುದುಕನ ವೇಷದಿಂದ ಬಂದು ಒಂದು ಪಾತ್ರೆಯನ್ನು ಈತನ ಕೈಲಿತ್ತು ಅದನ್ನು ಭದ್ರವಾಗಿರಿಸಬೇಕೆಂದೂ ತಾನೇ ಬಂದು ಅದನ್ನು ತೆಗೆದುಕೊಂಡು ಹೋಗುವುದಾಗಿಯೂ ಹೇಳಿಹೋದ. ತಿರುನೀಲಕಂಠ ಅದನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರವಾಗಿರಿಸಿದ್ದರೂ ಅದು ಮಾಯವಾಗಿತ್ತು. ಮಾರನೆಯ ದಿನ ಪಾತ್ರೆ ಕೇಳಲು ಬಂದ ಮುದುಕನಿಗೆ ಅದನ್ನು ಕೊಡಲಾಗದೆ ನೀಲಕಂಠ ವಿಚಾರಣೆಗೆ ಗುರಿಯಾದ. 

	ಈ ಪಾತ್ರೆಗೆ ಬದಲಾಗಿ ಒಂದು ಹೊನ್ನ ಪಾತ್ರೆಯನ್ನು ಕೊಡಿಸುತ್ತೇವೆಂದು ಅಲ್ಲಿ ನೆರೆದಿದ್ದ ಹಿರಿಯರು ಹೇಳಿದರೂ ಮುದುಕ ಒಪ್ಪದಾದ, ಕಡೆಗೆ ಸತಿಪತಿಗಳಿಬ್ಬರೂ ಪರಸ್ಪರ ಕೈಹಿಡಿದು ಕೊಳದಲ್ಲಿ ಮುಳುಗಿ ಪಾತ್ರೆ ಕಳೆದುಹೋಯಿತೆಂದು ಹೇಳಿದರೆ ಒಪ್ಪುವೆನೆಂದ. ಸತಿಯಿಟ್ಟ ಆಣೆಯಿಂದಾಗಿ ತಿರುನೀಲಕಂಠನಿಗೆ ಅದು ಸಾಧ್ಯವಿಲ್ಲವಾಯಿತು. ಕೊನೆಗೆ ಒಂದು ಕೋಲಿನ ಎರಡು ತುದಿಗಳನ್ನು ಹಿಡಿದು ಮುಳುಗಿದರೂ ಒಪ್ಪುವೆನೆಂದು ಮುದುಕ ಹೇಳಲಾಗಿ ವಿಧಿಯಿಲ್ಲದೆ ಅದರಂತೆ ಅವರು ಮುಳುಗಿ ಮೇಲೇಳಲಾಗಿ ಅವರು ಹದಿನಾರರ ಹರೆಯದವರಾದರು. ಆಗ ಭಿಕ್ಷುಕ ವೇಷದಲ್ಲಿದ್ದ ಶಿವ ತನ್ನ ನಿಜರೂಪವನ್ನು ತೋರಿದ. ಶಿವನ ಅಪ್ಪಣೆಯಂತೆ ಅವರು ಸ್ವಲ್ಪ ಕಾಲ ಭೂಲೋಕದಲ್ಲಿದ್ದು ಗಣಪದವಿಯನ್ನು ಪಡೆದರು. ಪೆರಿಯ ಪುರಾಣದ ಕಥೆಗೂ ಹರಿಹರನ ಈ ಕಥೆಗೂ ಕೆಲವು ವ್ಯತ್ಯಾಸಗಳು ಕಂಡು ಬರುತ್ತವೆ. 

	ಕನ್ನಡದಲ್ಲಿ ತಿರುನೀಲಕಂಠನ ಕಥೆ ಉತ್ತರದೇಶದ ಬಸವಲಿಂಗನ ಬಸವೇಶ್ವರ ಪುರಾಣದ ಕಥಾಸಾಗರ, ತ್ರಿಷಷ್ಟಿ ಪುರಾತನ ವಿಲಾಸ, ಪಾಲ್ಕುರಿಕೆ ಸೋಮನಾಥನ ಸೋಮೇಶ್ವರಪುರಾಣ, ತಿರುನೀಲಕಂಠರ ರಗಳೆ, ಶಾಂತಲಿಂಗದೇಶಿಕನ ಭೈರವೇಶ್ವರಕಾವ್ಯದ ಕಥಾಸೂತ್ರರತ್ನಾಕರ, ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ, ಮರಿತೋಂಟದಾರ್ಯನ ಸಿದ್ಧೇಶ್ವರಪುರಾಣ, ಸಿದ್ಧನಂಜೇಶನ ಗುರುರಾಜಚಾರಿತ್ರ. ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತಮಹಾಪುರಾಣ, ಭೀಮಕವಿಯ ಬಸವಪುರಾಣ, ಕುಮಾರ ಪದ್ಮರಸನ ಸಾನಂದಪುರಾಣ, ಪರ್ವತೇಶನ ಚತುರಾಚಾರ್ಯ ಪುರಾಣ ಇವೇ ಮೊದಲಾದ ಕಾವ್ಯಗಳಲ್ಲಿ ಕಂಡು ಬರುತ್ತದೆ.
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ